ಕಾವ್ಯಸಂಗೀತ ಗುರುಕುಲ:


    ಸಾಹಿತ್ಯ ಮತ್ತು ಸಂಗೀತವು ಸುಸಂಸ್ಕೃತ ಸಮಾಜದ ಎರಡು ಕಣ್ಣುಗಳಿದ್ದಂತೆ. ಸಾತ್ವಿಕ ಸಮಾಜದ ನಿರ್ಮಾಣದಲ್ಲಿ ಇವೆರಡರ ಕೊಡುಗೆ ಅತ್ಯಂತ ವಿಶಿಷ್ಟ ಹಾಗೂ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ ೮ ಜ್ನ್ಯಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಕನ್ನಡ ಕಾವ್ಯ-ಪರಂಪರೆಯು ಅತ್ಯಂತ ಶ್ರೀಮಂತವಾದದ್ದು. ಆದಿಕವಿ ಪಂಪನಿಂದ ಮೊದಲ್ಗೊಂಡು ರನ್ನ, ರಾಘವಾಂಕ, ಕುಮಾರವ್ಯಾಸ, ಬೇಂದ್ರೆ, ಕುವೆಂಪು, ನರಸಿಂಹಸ್ವಾಮಿ ಮುಂತಾದ ನೂರಾರು ಶ್ರೇಷ್ಠ ಕವಿಗಳು ಕನ್ನಡ ಭಾಷೆಯಲ್ಲಿ ಅದ್ಭುತವಾದ ಕಾವ್ಯರಚನೆಯನ್ನು ಮಾಡಿ ಕನ್ನಡ ಭಾಷೆಯನ್ನೂ ಶ್ರೀಮಂತಗೊಳಿಸಿದ್ದಾರೆ.

    ಚಂಪೂಕಾವ್ಯದಿಂದ ಚುಟುಕುಗಳವರೆಗಿನ ಕನ್ನಡ ಕಾವ್ಯದ ಹರವು ಅಗಾಧ ಹಾಗೂ ಅದ್ವಿತೀಯ. ಆದರೆ ಇಂದಿನ ದಿನಗಳಲ್ಲಿ ಜನಸಾಮಾನ್ಯರು ಇಂತಹ ಅದ್ಭುತವಾದ ಕಾವ್ಯದಿಂದ ವಿಮುಖರಾಗಿ ಯಾವುದೇ ಆದರ್ಶಗಳಿಲ್ಲದ ಕೀಳು ಅಭಿರುಚಿಯ ಸಾಹಿತ್ಯ ಹಾಗೂ ಸಂಗೀತದ ಪೋಷಕರಾಗಿರುವುದು ಕರ್ನಾಟಕದ ದುರಂತವಲ್ಲದೆ ಇನ್ನೇನು..?? ಸಾಹಿತ್ಯ ಮತ್ತು ಸಂಗೀತದ ಉದ್ದೇಶವು ಬರಿಯ ಮನೋರಂಜನೆಯಾಗಿರದೆ ಜೊತೆ-ಜೊತೆಗೆ ಮನೋವಿಕಾಸವೂ ಆಗಬೇಕು ಎಂಬುವ ಸದುದ್ದೇಶದಿಂದ ಸೃಷ್ಟಿಯಾದ ವಿಶಿಷ್ಟ ಗಾಯನ ಪ್ರಕಾರವೇ "ಕಾವ್ಯ-ಸಂಗೀತ". ಕನ್ನಡದ ಶ್ರೇಷ್ಠ ಕವಿಗಳ ಸತ್ವಭರಿತ, ಮೌಲ್ಯಾಧಾರಿತ ಕಾವ್ಯವನ್ನು ಜನಸಾಮಾನ್ಯಕ್ಕೆ ಸಂಗೀತದ ಲೇಪನದೊಂದಿಗೆ ತಲುಪಿಸಿ, ಸಾತ್ವಿಕ ಸಮಾಜವನ್ನು ನಿರ್ಮಿಸುವುದೇ ಕಾವ್ಯಸಂಗೀತದ ಉದ್ದೇಶ ಮತ್ತು ಹೆಗ್ಗುರಿ.

    ಷಟ್ಪದಿಗಳು, ವಚನಸಾಹಿತ್ಯ, ದಾಸಸಾಹಿತ್ಯ, ತತ್ವಪದಗಳು, ಭಾವಗೀತೆಗಳು, ದೇಶಭಕ್ತಿಗೀತೆಗಳು, ಜಾನಪದ ಸಾಹಿತ್ಯ, ಚುಟುಕಗಳು, ಮುಂತಾದ ಎಲ್ಲ ಕಾವ್ಯವೈವಿದ್ಯಗಳನ್ನು ಕಾವ್ಯಸಂಗೀತವು ಅಳವಡಿಸಿಕೊಳ್ಳುತ್ತದೆ. ಶ್ರೋತೃಗಳನ್ನು ರಂಜಿಸುವ ಪ್ರಕ್ರಿಯೆಯ ಜೊತೆಜೊತೆಗೆ ಬೌದ್ಧಿಕವಾಗಿಯೂ, ನೈತಿಕವಾಗಿಯೂ ಜಾಗ್ರತಗೊಳಿಸಿ ತನ್ಮೂಲಕ ಸಾತ್ವಿಕ ಸಮಾಜದ ನಿರ್ಮಾಣದಲ್ಲಿ ಕವಿಗಳನ್ನು, ಸಂಗೀತಗಾರರನ್ನು ತೊಡಗಿಸಿಕೊಳ್ಳುವುದು ಕಾವ್ಯಸಂಗೀತದ ವಿಶೇಷ.

    ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪ್ರಸ್ತುತ ಸಮಾಜದಲ್ಲಿ ಪ್ರತಿನಿತ್ಯವೂ ನಡೆಯುತ್ತಿರುವ ಅನೈತಿಕತೆ, ಕೊಲೆ, ದರೋಡೆ ಮತ್ತು ಭ್ರಷ್ಟಾಚಾರಕ್ಕೆ ನಾವು ನೈತಿಕ ಶಿಕ್ಷಣ ನೀಡದಿರುವುದೇ, ಕಾರಣವಲ್ಲವೇ..?? ನಾವು ಮಕ್ಕಳನ್ನು ಹೇಗೆ ಬೆಳೆಸುತ್ತಿದ್ದೇವೆ ..? ಯಾವ ರೀತಿಯಲ್ಲಿ ಶಿಕ್ಷಣವನ್ನು ನೀಡುತ್ತಿದ್ದೇವೆ? ಯೋಚಿಸಿ ನೋಡಿ. ನಾವು ಮಕ್ಕಳನ್ನು ಓದಿಸಿ ಅವರನ್ನು ಮುಂದೊಂದು ದುಡಿಯುವ ಯಂತ್ರವನ್ನಾಗಿಸುತ್ತಿದ್ದೇವಲ್ಲದೆ ಪರರ ನೋವಿಗೆ ಮಿಡಿಯುವ, ದೇಶಕ್ಕಾಗಿ ದುಡಿಯುವ ನೈತಿಕ, ಮಾನವೀಯ ಗುಣಗಳನ್ನು ರೂಢಿಸಿಕೊಳ್ಳುವ ದಿಸೆಯಲ್ಲಿ ಬೆಳೆಸುತ್ತಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಶಿಕ್ಷಣದೊಂದಿಗೆ ಕಲೆ ಮತ್ತು ಸಾಹಿತ್ಯವನ್ನು ಅಭ್ಯಾಸ ಮಾಡಿದಲ್ಲಿ, ಸಂಸ್ಕಾರವನ್ನು ಪಡೆದ ಮಕ್ಕಳು ಬೆಳೆದು ಮುಂದೆ ಸತ್ಪ್ರಜೆಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಒಂದು ಸದುದ್ದೇಶದೊಂದಿಗೆ ೨೦೧೩ರಲ್ಲಿ ಕಾವ್ಯಸಂಗೀತ ಗುರುಕುಲದ ಸ್ಥಾಪನೆಯಾಯಿತು. ಪ್ರತಿನಿತ್ಯವೂ ನೂರಾರು ವಿದ್ಯಾರ್ಥಿಗಳಿಗೆ ಗುರುಕುಲದಲ್ಲಿ ಕಾವ್ಯಸಂಗೀತವನ್ನು ಉಚಿತವಾಗಿ ಬೋಧಿಸಲಾಗುತ್ತಿದೆ. ಇದಲ್ಲದೇ ಪ್ರತಿವರುಷವು ಸಂಗೀತವನ್ನೇ ತಮ್ಮ ಜೀವನದ ಗುರಿಯನ್ನಾಗಿಸಿಕೊಳ್ಳುವ ೫ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೌಢಶಿಕ್ಷಣದ ನಂತರ ಆಯ್ಕೆ ಮಾಡಿ ೫ ವರುಷಗಳ ಅವಧಿಗೆ ದತ್ತು ಪಡೆದು ಗುರುಕುಲದಲ್ಲೇ ಊಟ, ವಸತಿ ಹಾಗೂ ಅವರ ಎಲ್ಲ ಅಗತ್ಯಗಳನ್ನು ಉಚಿತವಾಗಿ ಪೂರೈಸಿ ಕಾವ್ಯಸಂಗೀತವನ್ನು ಕಲಿಸಲಾಗುತ್ತಿದೆ.